BSOAA-Perth-ISC2014
Basava Samith of Australasia -Perth Chapter BSOAA-Perth-ISC2014
Basava Samithi of Australasia, Perth Chapter has successfully hosted  the Sixth “International Sharana Samskriti Sammelana” held in Perth, Western Australia, on 26th April 2014. This international meet is held once in two years under the auspices of Basava Samithi of Australasia, consisting of chapters of Basava Samithi from all the major cities of Australia, New Zealand and Singapore. Around 350 guests from different parts of the world attended this International meet.
    Date : 26th April 2014
       Venue: Melville Hall, 10 Almondbury Road,Booragoon, Perth - 6154

Photos - Set 1
Photos - Set 2

ಆರನೆಯ ಅಂತಾರಾಷ್ಟ್ರೀಯ ಶರಣ ಸಂಸ್ಕೃತಿ ಸಮ್ಮೇಳನ: ಆಸ್ಟ್ರೇಲಿಯಾದಲ್ಲಿ ಮಾರ್ದನಿಗೊಂಡ ಬಸವಣ್ಣನವರ ಮಾನವತೆಯ ಸಂದೇಶ. ವರದಿ: ಶ್ರೀ ಗಂಗಾಧರ ಹೆಗಡೆ,  ಪರ್ತ್

ಪರ್ತ್, ಆಸ್ಟ್ರೇಲಿಯ ೨೬-ಎಪ್ರಿಲ್-೨೦೧೪ : ಆರನೆಯ ಅಂತಾರಾಷ್ಟ್ರೀಯ ಶರಣ ಸಂಸ್ಕೃತಿ ಸಮ್ಮೇಳನ ಆಸ್ಟ್ರೇಲಿಯದ ಪರ್ತ್ ಮಹಾನಗರದಲ್ಲಿ ಯಶಸ್ವಿಯಾಗಿ ನೆರವೇರಿತು. ಆಸ್ಟ್ರೇಲಿಯ ಬಸವ ಸಮಿತಿಯ ಪರ್ತ್ ಶಾಖೆಯು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯದ ನಿವಾಸಿಗಳಲ್ಲದೇ ಭಾರತ, ನ್ಯೂಜಿಲ್ಯಾಂಡ, ಯುನೈಟೆಡ್ ಕಿಂಗ್ಡಮ್, ಸಿಂಗಾಪುರವೂ ಸೇರಿದಂತೆ ದೇಶ-ವಿದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು. ನ್ಯೂಜಿಲ್ಯಾಂಡ, ಬ್ರಿಸ್ಬೇನ್, ಮೆಲ್ಬರ್ನ್  ಮತ್ತು ಸಿಡ್ನಿಯ ಬಸವ ಸಮಿತಿಯ ಶಾಖೆಗಳಲ್ಲದೇ ಪರ್ತ್‍ನ ಭಾರತೀಯ ಮೂಲದವರು ಮತ್ತು ಭಾರತದ ಹಲವಾರು ಜನರು, ಸಂಘ ಸಂಸ್ಥೆಗಳು ಈ ಸಮ್ಮೇಳನಕ್ಕೆ ಸಹಕಾರ ನೀಡಿದ್ದರು.
ಮೈಸೂರಿನ ಸುತ್ತೂರು ಮಠದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಯವರು ಮತ್ತು ವಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ದಿವ್ಯ ಸಾ ನ್ನಿ ಧ್ಯದಲ್ಲಿ ನಡೆದ ಬೆಳಗಿನ ಉದ್ಘಾಟನಾ ಸಮಾರಂಭ ದ   ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳೂ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆದ ಶ್ರೀ ಜಗದೀಶ ಶೆಟ್ಟರ್ ಆಗಮಿಸಿದ್ದರು. ಜೆ ಎಸ್ ಎಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ಶ್ರೀ ಬಿ. ಸುರೇಶ್. ಆಸ್ಟ್ರೇಲೇಶಿಯಾ ಬಸವ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪರ್ತ್ ಘಟಕದ ಅಧ್ಯಕ್ಷರಾದ ಡಾ. ಜಗದೀಶ ಜಾಂಬೋಟಿ ಮತ್ತು ಕಾರ್ಯದರ್ಶಿ ಶ್ರೀಮತಿ ನೀಲಾ ಗುಬ್ಬಿ ಅವರೂ ವೇದಿಕೆಯ ಮೇಲೆ ಅವರು ಉಪಸ್ಥಿತರಿದ್ದರು.

ಬಸವಣ್ಣನವರ ಸಮಾನತೆಯ, ಮಾನವತೆಯ ಸಂದೇಶ ಮತ್ತು ತತ್ವಗಳ ಪ್ರಚಾರ,  ಶರಣರ ಜೀವನ ಶೈಲಿ, ಪಶ್ಚಿಮ ದೇಶಗಳಲ್ಲಿ ಶರಣ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಎದುರಾಗುವ ವಿಷಯಗಳು, ಮಹಿಳೆಯರಿಗೆ ಅಧಿಕಾರ ಮತ್ತು ಸಬಲೀಕರಣ, ವೀರಶೈವ-ಲಿಂಗಾಯತರ
ಸಂಸ್ಕೃತಿ ಮತ್ತು ಇಂತಹ ಶ್ರೀಮಂತ ಪರಂಪರೆಯನ್ನು ಮುಂದಿನ ತಲೆಮಾರಿಗೆ ಬಳುವಳಿಯಾಗಿಸುವಲ್ಲಿ ಇಂದಿನವರ ಕರ್ತವ್ಯ ಮತ್ತು ಪಾತ್ರಗಳ ಬಗ್ಗೆ ಬೆಳಗಿನಿಂದಲೇ ಅನೇಕ ವಿಚಾರ ಸಂಕಿರಣಗಳು ಹಾಗು ಚರ್ಚೆಗಳು ಜರುಗಿದವು. ಶ್ರೀಮತಿ ಚೈತ್ರಾ ಜಗದೀಶ್ ಅವರ ವಚನ ಗಾಯನದ ಧ್ವನಿ ಸುರುಳಿ  'ವಚನಧಾರೆ' ಯನ್ನು ಶ್ರೀ ಶ್ರೀ ದೇಶಿಕೇಂದ್ರ ಸ್ವಾಮಿಜಿಯವರು ಮತ್ತು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಲೋಕಾರ್ಪಣೆ ಮಾಡಿದರು. ಡಾ.ಮಹಾಂತೇಶ ಬಿರಾದಾರ ಮತ್ತು ಶ್ರೀ ಶಶಿ ಶಿವಮ್ಮನವರ ಅವರು ಸಂಪಾದಿಸಿದ 'ಶರಣ ಸಂಗಮ' ಸ್ಮರಣ ಸಂಚಿಕೆಯನ್ನು ಶ್ರೀ ಜಗದೀಶ ಶೆಟ್ಟರ್ ಅನಾವರಣಗೊಳಿಸಿದರು. ಮುಂಜಾನೆಯ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪ್ರೇಮಾ ಜಗದೀಶ್, ಶ್ರೀ ಸುಶೀಲ್ ಉಟಗಿ ಮತ್ತು ಕುಮಾರಿ ಅನ್ನಪೂರ್ಣ ಜಗದೀಶ್ ಅವರು ಉತ್ಸಾಹದಿಂದ ನಿರ್ವಹಿಸಿದರು.

ದಿನವಿಡೀ ನಡೆದ ವಿಚಾರ ಗೋಷ್ಟಿಗಳ ನಂತರ ಸಂಜೆಯ ಸಮಾರೋಪ ಸಮಾರಂಭ ಮಕ್ಕಳು ಭಾರತ ಮತ್ತು ಆಸ್ಟ್ರೇಲಿಯದ ರಾಷ್ಟ್ರಗೀತೆಗಳನ್ನು್
ಹಾಡುವುದರೊಂದಿಗೆ ಆರಂಭವಾಯಿತು. ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಮತ್ತು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳೂ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆದ ಶ್ರೀ ಜಗದೀಶ ಶೆಟ್ಟರ್, ಜೆ ಎಸ್ ಎಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ಶ್ರೀ ಬಿ. ಸುರೇಶ್, ಪರ್ತ್ ನಗರದಲ್ಲಿ ಭಾರತೀಯ ರಾಯಭಾರಿ ಇಲಾಖೆಯ ಕೌನ್ಸುಲ್ ಜನರಲ್ ಶ್ರೀ ಎಂ. ಸುಬ್ಬರಾಯುಡು  ಮತ್ತು ಪಶ್ಚಿಮ ಆಸ್ಟ್ರೇಲಿಯಾ ಭಾರತೀಯ ಸಂಘ ದ ಅಧ್ಯಕ್ಷ ಪರ್ತ್ ವೇದ ತರಬೇತಿ ಮತ್ತು ಸಂಸ್ಕೃತಿ ಸಂಘಟನೆಯ ಅಧ್ಯಕ್ಷ ಶ್ರೀ ಮುಕೇಶ್ ಜೈನ್, ಪರ್ತ್ ವೇದ ತರಬೇತಿ ಮತ್ತು ಸಂಸ್ಕೃತಿ ಸಂಘಟನೆಯ ಪರ್ತ್ ವೇದ ತರಬೇತಿ ಮತ್ತು ಸಂಸ್ಕೃತಿ ಸಂಘಟನೆಯ ಅಧ್ಯಕ್ಷ ಶ್ರೀ ಶ್ರೀಪಾದ ಭಟ್ ಹಾಗೂ ಪಶ್ಚಿಮ ಆಸ್ಟ್ರೇಲಿಯಾ  ಕನ್ನಡ ಸಂಘದ ಅಧ್ಯಕ್ಷ ಶ್ರೀ ಸತ್ಯಜಿತ್ ಸುವರ್ಣ ಅವರೂ ಭಾಗವಹಿಸಿದ್ದು ವಿಶೇಷವಾಗಿತ್ತು. ಗಣ್ಯರು ದೀಪಬೆಳಗಿಸಿ ಉದ್ಘಾಟಿಸಿದ ಸಭೆಗೆ ಬಸವ ಸಮಿತಿ ಪರ್ತ ಅಧ್ಯಕ್ಷ ಡಾ| ಜಗದೀಶ ಜಾಂಬೋಟಿ ಸ್ವಾಗತ ಭಾಷಣ ಮಾಡಿದರು.

ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಶ್ರೀ ಜಗದೀಶ ಶೆಟ್ಟರ್ ಅವರು ದೂರದ ದೇಶಗಳಲ್ಲಿ ನೆಲೆಸಿರುವವರು ಭಾರತೀಯ ವಾತಾವರಣ ನಿರ್ಮಿಸಿ ಸಂತೋಷ ಹಂಚುತ್ತ, ಪರಂಪರೆಯನ್ನು ಅಳವಡಿಸಿಕೊಂಡಿರುವುದನ್ನು ಸ್ಮರಿಸಿದರು. ತಾಯ್ನಾಡಿನಲ್ಲೇ ಜನರು ವಿದೇಶಿ ಸಂಸ್ಕೃತಿಯ ಬಗ್ಗೆ ಆಕರ್ಷಿತವಾಗುತ್ತಿರುವ ಸಂದರ್ಭದಲ್ಲಿ ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಅದರಲ್ಲೂ ಶರಣ ಸಂಸ್ಕೃತಿ ಉಳಿದುಕೊಂಡು ಮುಂದಿನ ಜನಾಂಗಕ್ಕೆ ಬಸವಾದಿ ಶರಣರ ಸಂದೇಶ ತಲುಪಿಸುವ ಕಾರ್ಯದಲ್ಲಿ ಸಂಘಟಿತರಾಗಿರುವುದು ಸಂತೋಷದ ಸಂಗತಿ, ನಿರಂತರವಾಗಿ ಬಸವಣ್ಣನವರ ತತ್ವ ಆದರ್ಶಗಳು ಜನರಲ್ಲಿ ವಿಶೇಷವಾಗಿ ಮಕ್ಕಳಲಿ ನೆಲೆಯೂರಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.  ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರಿಕೆಟ್, ಬ್ಯಾಡ್ಮಿಂಟನ್ ಮೊದಲಾದ ಕ್ರೀಡೆಗಳಲ್ಲಿ ವಿಜೇತರಾದ ತಂಡದವರಿಗೆ ಜಗದೀಶ ಶೆಟ್ಟರು ಬಹುಮಾನಗಳನ್ನು ವಿತರಿಸಿ ಹಾರೈಸಿದರು. ಭಾರತೀಯ ದೂತಾವಾಸದ ಕೌನ್ಸುಲ್ ಜನರಲ್ ಶ್ರೀ ಸುಬ್ಬರಾಯುಡು ಮಾತನಾಡಿ ಪರ್ತನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಭಾರತೀಯರು ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ಥಳೀಯರ ಮೇಲೆ ತಮ್ಮ ಸಂಸ್ಕೃತಿಯ ಪ್ರಭಾವ ಬೀರು ತ್ತಿದ್ದಾರೆ, ಸಾಧನೆಗೆ ಸಂಖ್ಯೆ ನಗಣ್ಯ ಎಂದು ಹೇಳಿದರು. ಭಾರತೀಯ, ವಿಶ್ವದ ಧಾರ್ಮಿಕ ಕ್ಷೇತ್ರಕ್ಕೆ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಬಸವಣ್ಣನವರ ಕೊಡುಗೆಯನ್ನು ಕೊಂಡಾಡಿದರು.

ಪರ್ತ್ ಬಸವ ಸಮಿತಿಯೊಂದಿಗೆ ಎಂದಿಗೂ ನಿಕಟ ಬಾಂಧವ್ಯ ಹೊಂದಿರುವ ಪಶ್ಚಿಮ ಆಸ್ಟ್ರೇಲಿಯಾ ಭಾರತೀಯ ಸಂಘ ದ ಇಂದಿನ ಮತ್ತು ಹಿಂದಿನ ಅಧ್ಯಕ್ಷರು, ಪರ್ತ್ ವೇದ ತರಬೇತಿ ಮತ್ತು ಸಂಸ್ಕೃತಿ ಸಂಘಟನೆಯ ಇಂದಿನ ಮತ್ತು ಹಿಂದಿನ ಅಧ್ಯಕ್ಷರು, ಪಶ್ಚಿಮ ಆಸ್ಟ್ರೇಲಿಯಾ  ಕನ್ನಡ ಸಂಘದ ಇಂದಿನ ಮತ್ತು ಹಿಂದಿನ ಅಧ್ಯಕ್ಷರುಗಳನ್ನು ಇದೇ ಸಂದರ್ಭದಲ್ಲಿ ಆದರಿಸಲಾಯಿತು.

ಮನೋರಂಜನ ಕಾರ್ಯಕ್ರಮದ ಅಂಗವಾಗಿ, ಪುಟಿಯುತ್ತಿದ್ದ ಅನೇಕ ಕಂದಮ್ಮಗಳು ವಚನಗಳನ್ನು ಸ್ಪುಟವಾಗಿ ಹಾಡಿದರು. ಶಾಲಾಮಕ್ಕಳಿಂದ   'ಆಯ್ದಕ್ಕಿ ಮಾರಯ್ಯ' ರೂಪಕದ ಮೂಲಕ ಮಾರಯ್ಯ ಮತ್ತು ಲಕ್ಕಮ್ಮ  ದಂಪತಿಗಳ ಕಾಯಕ ನಿಷ್ಠೆ  ಮತ್ತು ನಿರಪೇಕ್ಷತೆಯನ್ನು ಸಾದರಪಡಿಸಿತು. ಶ್ರೀಮತಿ ಸುಧಾ ಹೆಗ್ಡೆ  ಹಾಗೂ ಕುಮಾರಿ ಅಮೃತಾ ನಂದಿ ಅವರು ಸುಶ್ರಾವ್ಯವಾಗಿ ವಚನಗಳನ್ನು ಹಾಡಿದರು. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜಿಯವರು ಪ್ರವಚನ ನೀಡಿ ನಮಗೆ ದೊರೆತಿರುವ ಮನಸ್ಸಿನ ಪಂಜರ ತೆಗೆದು ಗಳಿಸುವುದೊಂದೇ ಉದ್ದೇಶ ಮಾಡಿಕೊಳ್ಳದೇ ಕಣ್ಣುಗಳಲ್ಲಿ ದೇವರ ಪ್ರತಿರೂಪವಾದ ಸುಂದರ, ಅಧ್ಬುತವಾದ ಜಗತ್ತನ್ನು ನೋಡಿ ಮನಸ್ಸಿನಲ್ಲಿ ಜಗತ್ತನ್ನು ಪ್ರೀತಿಸುತ್ತ ಬುದ್ಧಿಶಕ್ತಿಯನ್ನು ಸಂಶೋಧನೆಯತ್ತ ತೊಡಗಿಸಿ ಯಾವ ಕಾರ್ಯದಲ್ಲಿ ತೊಡಗಿದರೆ ಯಾವುದನ್ನು ಸಾಧಿಸಿದರೆ ಜೀವನ ಸಾರ್ಥಕವಾಗುವುದೋ ಅಂತಹ ಕಾರ್ಯಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು. ಜಗತ್ತು ಸತ್ಯದ ಅನುಭೂತಿಯ ಸೃಷ್ಟಿ, ಪ್ರತೀಕ. ಶರಣರ ಬಳಗ ದುಡಿದು ದಾಸೋಹ ಮಾಡಿ ಕೂಡಿ ಅನುಭಾವ ಪಡೆಯುತ್ತ ಎಲ್ಲರೂ ಆತ್ಮೀಯವಾಗಿ ಕೌಟುಂಬಿಕ ಬಳಗವಾಗಲಿ ಎಂದರು. ಶಕ್ತಿಯು ನಮ್ಮಲ್ಲಿ ಇರುವವರೆಗೆ ತೃಪ್ತಿಯ ದೀಪ ಬೆಳಗಿಸುತ್ತ,  ಭಾವಶುದ್ಧಿಯಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತ ಸತ್ಯವ ನುಡಿಯುತ್ತ ಈ ಪ್ರಪಂಚವನ್ನೇ ದೇವಲೋಕವಾಗಿಸಿ ಸಕಲರೂ ಸಂತೋಷದಿಂದ ಎಲ್ಲಿದ್ದರೂ ಚೆನ್ನಾಗಿ ಬಾಳಲಿ ಎಂದು ಹರಸಿದರು.


ಸುತ್ತೂರು ಮಠದ ಶ್ರೀ ಶ್ರೀ ದೇಶಿಕೇಂದ್ರ ಸ್ವಾಮಿಜಿಯವರು ಆಶಿರ್ವಚನ ನೀಡುತ್ತ ಮನುಷ್ಯನ ಜೀವನ ನಡೆಸಲು ಸಹಕರಿಸುವ ಪಂಚೇಂದ್ರಿಯಗಳ ನಡುವೆ ಸಾಮರಸ್ಯ ಸಾಧಿಸಿ ರಾಗದ್ವೇಷಗಳಿಲ್ಲದೇ ಲೌಕಿಕ ವ್ಯವಹಾರಗಳ ನಡುವೆಯಿದ್ದೂ ಸದಾ ಭಗವಂತನ ಕಡೆ ಗಮನ ಕೊಡುವಾಗ ಭಗವಂತನ ಸ್ವರೂಪವನ್ನೂ ಸಾನಿಧ್ಯವನ್ನೂ ಪಡೆಯಲು ಸಾಧ್ಯ ಎಂದು ಬಸವಣ್ಣನವರ ವಚನಗಳನ್ನು ಮತ್ತು ಶ್ರೀ ಶಂಕರರ ಶ್ಲೋಕಗಳ ಉದಾಹರಿಸಿ ಹೇಳಿದರು.


ಕುಮಾರಿ ಪ್ರಜ್ಞಾ ಜಗದೀಶ ಮತ್ತು ಶ್ರೀ ಚಿದಾನಂದ ಜವಳಿ ಸಂಜೆಯ ಕಾರ್ಯಕ್ರಮ ವನ್ನು ಆಕರ್ಷಕವಾಗಿ ನಿರೂಪಿಸಿದರು. ಶ್ರೀಮತಿ ನೀಲಾ ಗುಬ್ಬಿಯವರ ವಂದನಾರ್ಪಣೆಯೊಂದಿಗೆ ಸಮಾವೇಶ ಯಶಸ್ವಿಯಾಗಿ ಮುಕ್ತಾಯವಾಯಿತು. ದಿನವಿಡಿ ಸಮಶೀತೋಷ್ಣವಾಗಿದ್ದ ಪರ್ತ್ ನಗರಕ್ಕೆ ಸಮಾರೋಪ ಸಮಾರಂಭ ಶುರುವಾಗುವ ಕೆಲವೇ ನಿಮಿಷಗಳ ಮೊದಲು ಮೋಡಗಟ್ಟಿದ್ದ ಆಕಾಶದಿಂದ ಮಳೆಯ ಹನಿಗಳು ಉದುರಿದ್ದು ವಿಶೇಷವಾಗಿತ್ತು. ಮಹಾಪ್ರಸಾದ ದಾಸೋಹದವನ್ನು ಪರ್ತ್ ಶಾಖೆಯ ಪದಾದಿಕಾರಿಗಳು ವ್ಯವಸ್ಥಿತವಾಗಿ ಏರ್ಪಡಿಸಿದ್ದರು. ಭಕ್ತಿ ಸಿಂಚಿತರಾದ ಜನ  ದೇಶ-ವಿದೇಶಗಳಲ್ಲಿ ಬಸವ ತತ್ವಗಳು ಸದಾಕಾಲ ಮಾರ್ದನಿಗೊಳ್ಳಲು ವಾಹಕವಾದರು.
ಮುಂದಿನ  ಏಳನೆಯ ಅಂ ತಾ ರಾಷ್ಟ್ರೀಯ ಶರಣ ಸಂಸ್ಕೃತಿ ಸಮ್ಮೇಳನ ಬ್ರಿಸ್ಬೇನನಲ್ಲಿ ಎಪ್ರಿಲ್ ೨೦೧೬ರಲ್ಲಿ ನಡೆಯಲಿದೆ.